ಕಪೀಶಿಯನರು : ಫ್ರೆಂಚ್ ಮೂಲದ ರಾಜವಂಶ. ಫ್ರಾನ್ಸಿನಲ್ಲೂ ಯುರೋಪಿನ ಇತರ ಕೆಲವೆಡೆಗಳಲ್ಲೂ ಈ ವಂಶದ ದೊರೆಗಳು ಆಳಿದರು. ಫ್ರಾನ್ಸಿನಲ್ಲಿ (987-96) ಆಳಿದ ಹ್ಯೂ ಕಾಪೆಟನಿಂದ ಶಾಖೋಪಶಾಖೆಗಳಾಗಿ ಒಡೆದ ವಂಶದ ದೊರೆಗಳನ್ನೆಲ್ಲ ಕಪೀಶಿಯನರೆಂದೇ ಕರೆಯಲಾಗಿದೆ. ಮೆರೊವಿಂಗಿಯನ್, ಕೆರೊಲಿಂಗಿಯನ್ ವಂಶಗಳ ಅನಂತರದ್ದು ಈ ರಾಜವಂಶ. ಆಂಜೂ ಮತ್ತು ಬ್ಲ್ವಾ ಪ್ರದೇಶಗಳ ಕೌಂಟ್ ಆಗಿದ್ದ ರಾಬರ್ಟ ದಿ ಸ್ಟ್ರಾಂಗ್ ಈ ವಂಶದ ಮೂಲಪುರುಷ. ಇವನ ಮಕ್ಕಳಾದ ಯೂಡ್ಸ್‌ ಮತ್ತು ಒಂದನೆಯ ರಾಬರ್ಟರಿಗೆ ಅನುಕ್ರಮವಾಗಿ 888 ಮತ್ತು 922ರಲ್ಲಿ ಫ್ರಾಂಕರ ದೊರೆಗಳೆಂದು ಪಟ್ಟಕಟ್ಟಲಾಗಿತ್ತು. ರಾಬರ್ಟನ ಅನಂತರ ಅವನ ಮಗ ಹ್ಯೂದಿ ದಿ ಗ್ರೇಟ್ ಕ್ಯಾರೊಲಿಂಜಿಯನ್ ವಂಶವನ್ನು ಮತ್ತೆ ಅಧಿಕಾರಕ್ಕೆ ತಂದ (936). ಆದರೆ 987ರಲ್ಲಿ ಕ್ಯಾರೊಲಿಂಜಿಯನ್ ಉತ್ತರಾಧಿಕಾರಿಯ ಹಕ್ಕನ್ನು ಕಡೆಗಣಿಸಿ ಹ್ಯೂ ದಿ ಗ್ರೇಟನ ಮಗ ಹ್ಯೂ ಕಾಪೆಟ್ ದೊರೆಯಾಗಿ ಆಯ್ಕೆ ಹೊಂದಿದ. ಪ್ಯಾರಿಸ್ ಇವನ ಕಾಲದಲ್ಲಿ ರಾಜಧಾನಿಯಾಯಿತು. ಆರಂಭದಲ್ಲಿ ಕೇವಲ ಒಂದು ಊಳಿಗಮಾನ್ಯ ಪದ್ಧತಿಯಾಗಿದ್ದ ತಮ್ಮ ರಾಜ್ಯವನ್ನು ಒಂದು ಪ್ರಬಲರಾಷ್ಟ್ರವಾಗಿ ಈ ವಂಶಜರು ಕಟ್ಟಿದರು. ಫ್ರಾನ್ಸಿನಲ್ಲಿ ಹ್ಯೂ ಕಾಟೆಟನಿಂದ ಕ್ರಮವಾಗಿ ವಂಶಪಾರಂಪರ್ಯವಾಗಿ ಬಂದ 13 ದೊರೆಗಳು ಕಪೀಶಿಯನರ ನೇರ ವಂಶೀಯರೆಂದು ಹೇಳಲಾಗಿದೆ. ಇವರ ಅನಂತರ ವ್ಯಾಲಾಯಿ ವಂಶದ 13 ಮಂದಿ ಕಪೀಶಿಯನ್ ದೊರೆಗಳು ಆಳಿದರು. ಆ ಮೇಲೆ ಬೌರ್ಬನಿನ ಕಪೀಶಿಯನರು ಬಂದರು.

ಫ್ರೆಂಚ್ ರಾಜವಂಶದ ಉಪಶಾಖೆಗಳವರು ಬರ್ಗಂಡಿಯ ಡ್ಯೂಕರಾಗಿದ್ದರು. ಪುರ್ವದ ರೋಮನ್ ಸಾಮ್ರಾಜ್ಯದ ಮೂವರು ಸಾಮ್ರಾಟರಾದ (1216-61) ಪೀಟರನೂ (ಈತ ಫ್ರಾನ್ಸಿನ ಆರನೆಯ ಲೂಯಿಯ ಮೊಮ್ಮಗ) ಅವನ ಮಕ್ಕಳಾದ ರಾಬರ್ಟ್ ಮತ್ತು ಎರಡನೆಯ ಬಾಲ್ಡ್‌ವಿನ್ ಇವರೂ ಕಪೀಶಿಯನರೇ.

ನೇಪಲ್ಸಿನಲ್ಲಿ 1266-1435ರ ವರೆಗೆ ಆಳಿದ ಎಂಟು ಮಂದಿಯೂ ಕಪೀಶಿಯನರು. ಈ ಶಾಖೆಯ ಮೊದಲ ದೊರೆ ಚಾರಲ್ಸ್‌ ಫ್ರಾನ್ಸಿನ ಒಂಬತ್ತನೆಯ ಲೂಯಿಯ ಸೋದರನ ವಂಶಜ. ಇವನ ಮರಿಮಗ ಚಾರಲ್ಸ್‌ ರಾಬರ್ಟ್ 1310ರಲ್ಲಿ ಹಂಗರಿಯ ಅರಸನಾದ. ಈ ವಂಶ 1382ರ ವರೆಗೆ ಅಲ್ಲಿ ಆಳುತ್ತಿತ್ತು. ಅಲ್ಲಿ ಆಳಿದ ಇನ್ನೊಬ್ಬ ದೊರೆ ಲೂಯಿ. ಫ್ರಾನ್ಸಿನ ದಕ್ಷಿಣದಲ್ಲಿದ್ದ ನವಾಬರನ್ನು ಇದೇ ವಂಶದ ಮೂವರು ದೊರೆಗಳು 1425ರವರೆಗೆ ಆಳಿದರು. ಮೊದಲ ದೊರೆ ಮೂರನೆಯ ಫಿಲಿಪ್ ಫ್ರಾನ್ಸಿನ ಮೂರನೆಯ ಫಿಲಿಪ್ನ ಮೊಮ್ಮಗ.                           	(ಎನ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ